ಜೇಮ್ಸ್‍ನ್, ರೇಮಂಡ್ ಡೆಲಾಯ್
1895 -. ಬಹುಮುಖ ಪ್ರತಿಭೆಯ ವಿದ್ವಾಂಸ. ಚೀನದ ಜಾನಪದ, ಇತಿಹಾಸ ಹಾಗೂ ಸಾಹಿತ್ಯದಲ್ಲಿ ಹೆಚ್ಚು ಪರಿಶ್ರಮ ಪಡೆದವ. ವಿಸ್‍ಕಾನ್‍ಸಿನ್, ಷಿಕಾಗೊ, ಮೌಂಟ್‍ಪೀಲ್‍ಯರ್, ಫ್ಲಾರೆನ್ಸ್, ವಿಯನ್ನ ಮತ್ತು ಲಂಡನ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಿದ. ಅನಂತರ ಅಧ್ಯಾಪಕ ವೃತ್ತಿಯನ್ನು ಕೈಗೊಂಡನಲ್ಲದೆ ಚೀನ ಸರ್ಕಾರದ ಶಿಕ್ಷಣ ಸಚಿವಾಲಯದಲ್ಲಿ (1925-38) ವಿವಿಧ ಹಂತಗಳಲ್ಲಿ ಕೆಲಸಮಾಡಿದ್ದಾನೆ; ಹಲವು ಉನ್ನತ ಸಂಘಸಂಸ್ಥೆಗಳಲ್ಲಿ ಹಿರಿಯ ಅಧಿಕಾರಿಯಾಗಿ ದುಡಿದಿದ್ದಾನೆ. 1932ರಲ್ಲಿ ಚೀನ ಜಾನಪದದ ಮೇಲೆ ಮೂರು ಉಪನ್ಯಾಸಗಳು ಎಂಬ ದೊಡ್ಡ ಗ್ರಂಥವೊಂದನ್ನು ಹೊರತಂದಿದ್ದಾನೆ. ಇತಿಹಾಸ ಹಾಗೂ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದಂತೆ ಹಲವು ಪ್ರಕಟನೆಗಳು ಈತನ ಹೆಸರಿಗಿವೆ.
(ಡಿ.ಕೆ.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ